ತರಂಗ ಚಿಹ್ನೆ -
ಹೆಚ್ಚು ಆಳವಿಲ್ಲದಿರುವ ಸಮುದ್ರ, ಸರೋವರ ಇವೇ ಮುಂತಾದ ಜಲಾಶಯಗಳ ತಳದಲ್ಲಿ ಸಂಚಿತವಾದ ಇನ್ನೂ ಗಟ್ಟಿ ಆಗದೆ ಇರುವ ಮರಳಿನ ಮೇಲುಭಾಗದಲ್ಲಿ ಹಂದಾಡುವ ಅಲೆಗಳ ಗುರುತು.  ಹರಿಯುವ ನೀರಿನ ಗತಿ ವೇಗ ಒತ್ತಡ ಮುಂತಾದವನ್ನು ಅನುಸರಿಸಿ ತರಂಗಚಿಹ್ನೆಗಳು ಏಕರೂಪವಾಗಿರಬಹುದು.  ಅಸಮಾಂಗೀಯವಾಗಿರಬಹುದು.  ಪ್ರಾಚೀನ ಭೂಸ್ವರೂಪವನ್ನು ಗುರುತಿಸುವಲ್ಲಿ ತರಂಗಚಿಹ್ನೆಗಳಿಂದ ಹೆಚ್ಚಿನ ಉಪಯೋಗವಿದೆ.  ಇವು ಕಡಲಿನ ನೇರದಲ್ಲಾಗಲಿ ಸರೋವರದಲ್ಲಾಗಲಿ ನಿಕ್ಷೇಪವಾದ ಶಿಲೆಗಳಲ್ಲಿ ಮೇಲುಗಡೆ ಇರುತ್ತವೆ.  ಮಳೆಯ ಮುದ್ರೆಗಳು, ಜಂತುಗಳ ಕಾಲುಗುರುತುಗಳು.  ಮಣ್ಣಿನ ಬಿರುಕುಗಳು ಮತ್ತು ತರಂಗಚಿಹ್ನೆಗಳು ಕೂಡುಗಲ್ಲುಗಳ ಪ್ರಧಾನಲಕ್ಷಣಗಳು.  ಬಿರುಗಾಳಿಯಿಂದ ಉಂಟಾದ ಅಲೆಗಳ ಗುರುತುಗಳು ಕಡಲಿನಲ್ಲಿ 60-95 ಮೀಟರ್ ಆಳದವರೆಗೆ ಸಿಕ್ಕಿವೆ.  ನದೀಪಾತ್ರವನ್ನು ಮುಟ್ಟುವ ತೂಗುಯ್ಯಾಲೆಯಂತಿರುವ ಅಲೆಗಳಿಂದಲೂ ಇವು ಉತ್ಪನ್ನವಾಗುವುದುಂಟು ; ನೆಲದ ಮೇಲೆ ಗಾಳಿಯಿಂದ ಶೇಖರವಾದ ಮರಳದಿಬ್ಬಗಳಲ್ಲಿಯೂ ವಾಯುಜನ್ಯ ತರಂಗ ಚಿಹ್ನೆಗಳು ಗೋಚರವಾಗುವುದುಂಟು, ಇವು ಸಿಕ್ಕುವ ಮರಳುಗಳಲ್ಲುಗಳಲ್ಲಿ ಸಾಮಾನ್ಯವಾಗಿ 0.06 ರಿಂದ 2m m ಅಳತೆಯ ಬೆಣಚುಕಲ್ಲಿನ (ಸಿಕತ) ಕಣಗಳೇ 80% ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರುತ್ತವೆ.  ಅಡ್ಡಪದರುಗಳು ಮತ್ತು ತರಂಗಚಿಹ್ನೆಗಳು ಮರಳುಗಲ್ಲಿನ ವಿಶೇಷ ಲಕ್ಷಣಗಳು.  ಮರಳಿನ ಕಣಗಳು ಬಲು ಗುಂಡಾಗಿರುತ್ತವೆ.  ಇವುಗಳಲ್ಲಿ ಪ್ರಾಯಶಃ ಅಸ್ಥಿರವಾದ ಖನಿಜಗಳ ಕಣಗಳಿರುವುದಿಲ್ಲ.  ಆಮ್ಲೀಕೃತ ಕಬ್ಬಿಣದ ಖನಿಜಗಳೂ ವಿರಳವಾಗಿ ಪ್ರಾಚೀನ ಜೀವ್ಯವಶೇಷಗಳೂ ಸಿಕ್ಕುವುದುಂಟು.  ಇವೆಲ್ಲವುಗಳ ಪರಿಶೀಲನೆಯಿಂದ ತರಂಗ ಚಿಹ್ನೆಗಳಿರುವ ಮರಳುಗಲ್ಲುಗಳು ಸಾಮಾನ್ಯವಾಗಿ ಕಡಲತೀರದಲ್ಲಿ ಬಲು ಆಳವಿಲ್ಲದೆ ಇರುವ ಜಲಪ್ರದೇಶದಲ್ಲಿ ನಿಕ್ಷೇಪವಾದವೆಂದು ನಿರ್ಧರಿಸಿ ಹೇಳಬಹುದು.  ಮರಳುದಿಬ್ಬಗಳಲ್ಲಿ ನೆಲದ ಜೀವಿಗಳ ಅವಶೇಷಗಳಿರುವುದುಂಟು.  ಭೂಮಿಯ ಮೇಲ್ಮೈಯ ಶಿಲೆಗಳಲ್ಲಿ 5%  ಭಾಗ ಪದರಗಳಿರುವ ಶಿಲೆಗಳಿವೆ.  ಇವುಗಳಲ್ಲಿ 5%-10% ಭಾಗ ಪೆಂಟೆಕಲ್ಲುಗಳಿಂದಲೂ ಆಗಿದೆ.  ತೆಟ್ಟೆನೀರಿನಲ್ಲಿ ಸಂಚಿತವಾದ ಶಿಲೆಗಳಲ್ಲಿ ತರಂಗಚಿಹ್ನೆಗಳು ಸುವ್ಯಕ್ತವಾಗಿರುತ್ತವೆ.  ಇವುಗಳ ಅಧ್ಯಯನದಿಂದ ತರಂಗಚಿಹ್ನೆಗಳಿರುವ ಶಿಲಾಪ್ರದೇಶದಲ್ಲಿ ಹಿಂದೆ ಕಡಲ ನೀರೊ ಸರೋವರವೂ ಇತ್ತು ಎಂಬುದು ನಿಶ್ಚಿತವಾಗುತ್ತದೆ. ತರಂಗಚಿಹ್ನೆಗಳು ಹಿಂದಿನ ಭೂಭಾಗದ ಸ್ವರೂಪ ವಾಯುಗುಣ ಮತ್ತು ಪರಿಸರದ ಸ್ವರೂಪದ ಪರಿಚಯವನ್ನು ನಮಗೆ ಮಾಡಿಕೊಡುತ್ತವೆ.
(ಎ.ಎನ್.ಎಸ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ